ಆತ್ಮನಿರ್ಣಯಾಧಿಕಾರ
ರಾಜ್ಯರಚನೆ ಹೇಗಿರಬೇಕೆಂಬುದನ್ನು ಆಯಾ ಜನ ಅಥವಾ ಜನಾಂಗವೇ ನಿರ್ಣಯಿಸತಕ್ಕದ್ದು ಎಂಬ ವಾದ (ಸೆಲ್ಫ ಡಿಟರ್ಮಿನೇಷನ್). ಒಂದು ಜನಾಂಗದಲ್ಲಿ ರಾಜಕೀಯ ಪ್ರಜ್ಞೆ ಬೆಳೆದು ರಾಷ್ಟ್ರಾಭಿಮಾನ ಉದಯವಾದಾಗ ಆ ಜನಾಂಗ ಸ್ವತಂತ್ರವಾಗಿ ಬಾಳಲಿಚ್ಛಿಸಿ ತಮ್ಮ ಅಭಿಲಾಷೆಗಳಿಗನುಗುಣವಾದ ರಾಜ್ಯವನ್ನು ಸ್ಥಾಪಿಸಿಕೊಳ್ಳುವುದು ಅಥವಾ ಒಂದು ರಾಜ್ಯದ ಅನೇಕ ಜನಾಂಗಗಳಿಂದ ಕೂಡಿದ ಒಕ್ಕೂಟವಾಗಿದ್ದರೆ ಆಯಾ ಜನಾಂಗಗಳು ತಮ್ಮ ಅಭಿಲಾಷೆಗೆ ತಕ್ಕಂತೆ ಸ್ವಯಮಾಧಿಪತ್ಯಗಳನ್ನು ಸ್ಥಾಪಿಸಲು ಪ್ರಯತ್ನಿಸುವುದು ಆಧುನಿಕ ರಾಷ್ಟ್ರೀಯತೆಯ ಲಕ್ಷಣಗಳಲ್ಲೊಂದು. ಹತ್ತೊಂಬತ್ತನೆಯ ಶತಮಾನದ ಮಧ್ಯಭಾಗದಲ್ಲಿ ಜನಾಂಗಗಳ ಈ ಅಭಿಲಾಷೆ ಒಂದು ತತ್ತ್ವರೂಪವನ್ನೇ ಹೊಂದಿ ಪ್ರತಿಯೊಂದು ಜನಾಂಗವೂ ತನ್ನ ರಾಜಕೀಯ ಭವಿಷ್ಯವನ್ನು ಆತ್ಮಸಂಕಲ್ಪದಿಂದಲೇ ನಿರ್ಧರಿಸಬೇಕು ಎಂಬ ವಾದ ಉದ್ಭವಿಸಿತು.

ಪ್ರಸ್ತುತ ರಾಜ್ಯಗಳು ಭಿನ್ನ ಭಿನ್ನ ಜನಾಂಗಗಳಿಂದ ಕೂಡಿಸಲ್ಪಟ್ಟ ಕೃತಕ ಒಕ್ಕೂಟಗಳೆಂದೂ ಇಂಥ ಒಕ್ಕೂಟಗಳಲ್ಲಿ ಸಹಬಾಳ್ವೆ ನಡೆಸಲು ಇಚ್ಛೆಪಡದ ಜನರು ತಮ್ಮ ಜನಾಂಗಗಳ ಆಧಾರದ ಮೇಲೆ ಬೇರೆ ಬೇರೆ ರಾಜ್ಯಗಳನ್ನು ಸ್ಥಾಪಿಸಿಕೊಳ್ಳುವುದು ತಮ್ಮ ಹಕ್ಕೆಂದೂ ಪ್ರತಿಪಾದಿಸಿದ ನಿದರ್ಶನಗಳು ಯೂರೋಪ್ ಖಂಡದಲ್ಲಿ ಕಂಡುಬಂದಿವೆ. ಮೊದಲನೆಯ ಮಹಾಯುದ್ಧಾನಂತರ ಅಮೆರಿಕ ಸಂಯುಕ್ತ ಸಂಸ್ಥಾನದ ಅಧ್ಯಕ್ಷ ವುಡ್‍ರೊ ವಿಲ್ಸನ್ ತನ್ನ ಅನೇಕ ಭಾಷಣಗಳಲ್ಲಿ ಆತ್ಮನಿರ್ಣಯಾಧಿಕಾರ ಕೇವಲ ವಾಕ್ಸರಣಿಯಲ್ಲ, ಇದೊಂದು ಆಜ್ಞಾರ್ಥಕ ತತ್ತ್ವಪ್ರಮಾಣದ ಕಾರ್ಯ; ಇದರ ಅಲಕ್ಷ್ಯತೆ ರಾಜನೀತಿಜ್ಞರ ಗಂಡಾಂತರವಾಗಿ ಪರಿಣಮಿಸೀತು ಎಂದು ಪ್ರತಿಪಾದಿಸಿದ. ಇದರ ಪ್ರಕಾರ ಪ್ರತಿಯೊಂದು ಜನಾಂಗವೂ ಪ್ರತ್ಯೇಕ ರಾಜ್ಯವನ್ನು ಹೊಂದಿರಬೇಕು. ಈ ತತ್ತ್ವವನ್ನನುಸರಿಸಿ ಮೊದಲನೆಯ ಮಹಾಯುದ್ಧಾನಂತರ ಕೆಲವು ಜನಾಂಗ ರಾಜ್ಯಗಳು ಅಸ್ತಿತ್ವಕ್ಕೆ ಬಂದುವು.

ಆದರೆ ಕೆಲವು ರಾಜನೀತಿಜ್ಞರ ಅಭಿಪ್ರಾಯದ ಪ್ರಕಾರ ಆತ್ಮನಿರ್ಣಯಾಧಿಕಾರ ಎರಡು ಕಡೆಯೂ ಹರಿತವಾದ ಅಲುಗುಳ್ಳ ಕತ್ತಿಯಿದ್ದಂತೆ. ಈ ಹಕ್ಕನ್ನು ಒಂದು ಸ್ಥಿಮಿತದಲ್ಲಿ ಬಹು ಎಚ್ಚರಿಕೆಯಿಂದ ಪ್ರಯೋಗಿಸಬೇಕು. ಹಿಂದೆ ಈ ತತ್ತ್ವ ಜನಾಂಗಗಳ ಸಂಘಟನಾಶಕ್ತಿಯಾಗಿತ್ತು. ಆದರೆ ಇತ್ತೀಚೆಗೆ ವಿಭಜನಾಶಕ್ತಿಯಾಗಿ ಪರಿಣಮಿಸಿದೆ. ಆದುದರಿಂದ ಜನಾಂಗಗಳು ಆತ್ಮನಿರ್ಣಯಾಧಿಕಾರವನ್ನು ಚಲಾಯಿಸುವುದರ ಮೂಲಕ ಸಂಸ್ಥಾಪಿಸಲ್ಪಟ್ಟಿರುವ ರಾಜ್ಯಗಳ ವಿಭಜನೆಯನ್ನು ಯಾಚಿಸುವುದು ತಮ್ಮ ಹಕ್ಕಿಗೆ ಮೀರಿದ್ದಾಗಿದೆ. ಈ ತತ್ತ್ವದ ಗುಣಾವಗುಣಗಳನ್ನು ತಿಳಿಯಲು, 1918 ಮತ್ತು 1919ರಲ್ಲಿ ಫಿನ್‍ಲೆಂಡ್ ರಾಜ್ಯದ ಆಲಂಡ್‍ದ್ವೀಪದ ನಿವಾಸಿಗಳು ತಮ್ಮ ವಿಭಜನೆಯನ್ನು ಆತ್ಮನಿರ್ಣಾಯಾಧಿಕಾರದ ಮೂಲಕ ಸೂಚಿಸಿದ್ದರ ಸಿಂಧುತ್ವವನ್ನು ಲೀಗ್ ಆಫ್ ನೇಷನ್ಸ್ ಕೌನ್ಸಿಲ್ 1920ರಲ್ಲಿ ನ್ಯಾಯತಜ್ಞರ ಸಮಿತಿಗೆ ವಹಿಸಿ ಅವರ ಅಭಿಪ್ರಾಯವನ್ನು ಕೋರಿತು. ಸಮಿತಿ ತನ್ನ ಅಭಿಪ್ರಾಯವನ್ನು ಕೆಳಗೆ ಕಂಡಂತೆ ನೀಡಿತು : ಸಂಸ್ಥಾಪಿಸಲ್ಪಟ್ಟಿರುವ ಪ್ರಭುತ್ವದಲ್ಲಿ ಜನಾಂಗಗಳು ಆತ್ಮನಿರ್ಣಯಾಧಿಕಾರದ ಮೂಲಕ ಪ್ರತ್ಯೇಕ ರಾಜ್ಯಗಳನ್ನು ಸ್ಥಾಪಿಸುವ ಹಕ್ಕನ್ನು ಪುಷ್ಟೀಕರಿಸಲು ಅಂತರರಾಷ್ಟ್ರೀಯ ಕಾನೂನಿನಲ್ಲಿ ಯಾವ ನಿಯಮವೂ ಕಾಣದು. ಸರ್ವಸಾಮಾನ್ಯವಾಗಿ ಒಂದು ರಾಜ್ಯದ ಜನ ತಮ್ಮ ರಾಜಕೀಯ ಭವಿಷ್ಯದ ಬಗ್ಗೆ ಆತ್ಮನಿರ್ಣಯದ ಮೂಲಕವಾಗಲಿ ಅಥವಾ ಬೇರಾವ ರೀತಿಯಲ್ಲಾಗಲಿ ನಿರ್ಧರಿಸುವ ಹಕ್ಕನ್ನು ಅನುಗ್ರಹಿಸುವುದು ಅಥವಾ ತಿರಸ್ಕರಿಸುವುದು ಪರಮಾಧಿಕಾರವನ್ನು ಹೊಂದಿರುವ ಆ ಪ್ರಭುತ್ವಕ್ಕೇ ಸೇರಿದ್ದು. ಆಲಂಡ್‍ದ್ವೀಪದ ನಿವಾಸಿಗಳು ಸೂಚಿಸಿರುವ ಆತ್ಮನಿರ್ಣಯದ ಹಕ್ಕನ್ನು ಪುರಸ್ಕರಿಸಿದರೆ ಅದು ಪ್ರಭುತ್ವದ ಶ್ರೇಷ್ಠಪರಮಾಧಿಕಾರದ ಉಲ್ಲಂಘನೆಯಾಗುವುದಲ್ಲದೆ ರಾಜ್ಯಗಳ ಸ್ಥಿರತೆ ಮತ್ತು ಅಂತರರಾಷ್ಟ್ರೀಯ ವ್ಯವಸ್ಥೆಯ ಭದ್ರತೆಗೆ ಅಪಾಯಕಾರಿಯಾಗುತ್ತದೆ.

(ಎಂ.ಕೆ.ಎಸ್.)

ವರ್ಗ:ಮೈಸೂರು ವಿಶ್ವವಿದ್ಯಾನಿಲಯ ವಿಶ್ವಕೋಶ